ಎಲು ಮುರುಟು 
	
ಮಕ್ಕಳ ಮೂಳೆಗಳಲ್ಲಿ ಸುಣ್ಣಾಂಶ ಸಾಕಷ್ಟು ಕಡಿಮೆಯಿದ್ದು, ಬೆಳೆಯುವ ಮೂಳೆಗಳು ಸೊಟ್ಟ ಸೊಟ್ಟಾಗುವ ರೋಗಕ್ಕೆ ಎಲುಮುರುಟು(ರಿಕೆಟ್ಸ್) ಎನ್ನುತ್ತಾರೆ. ಇದಕ್ಕೆ ಮುಟ್ಟುದೋಷ, ಬಾಲಗ್ರಹವೆಂದು ಜನಸಾಮಾನ್ಯರು ಕರೆಯುತ್ತಾರೆ. ಇದು ದೋಷವೂ ಅಲ್ಲ ಬಾಲಗ್ರಹವೂ ಅಲ್ಲ. ಪೌಷ್ಠಿಕಾಂಶದ ಆಹಾರ ಕೊರತೆ ಮತ್ತು ಡಿ ಜೀವಸತ್ವದ ಕೊರತೆ ಮತ್ತು ಬಿಸಿಲಿನ ಅತಿನೇರಳೆಕಿರಣಗಳಿಂದ ವಂಚಿತರಾಗುವುದರಿಂದ ಮೂಳೆಯಲ್ಲಿ ಸುಣ್ಣಾಂಶ ಕೂಡಿಕೊಳ್ಳುವಲ್ಲಿ ಕೊರತೆ ಕಾಣಿಸುತ್ತದೆ. ಹೀಗಾಗಿ ಬೆಳೆಯುವ ಎಲುಬು ಮೆತ್ತಗಾಗಿ ಭಾರ ತಾಳದೆ ಅಂಕುಡೊಂಕಾಗುತ್ತವೆ. ಮಗುವಿಗೆ ವರ್ಷ ತುಂಬುವ ಮೊದಲಿಗೆ ಇಲ್ಲವೇ ಮರು ವರ್ಷದಲ್ಲಿದು ಕಾಣಿಸಿಕೊಳ್ಳುವದು ಸಾಮಾನ್ಯ. ಉಷ್ಣವಲಯದಲ್ಲಿ ಬಹುಮಟ್ಟಿಗೆ ಎಲ್ಲರೂ ದೇಹವನ್ನು ಬಿಸಿಲಿಗೊಡ್ಡುವುದರಿಂದಾಗಿ ಎಲುಮುರುಟು ರೋಗ ವಿರಳ. ಮೀನು ತಿನ್ನುವವರಲ್ಲೂ ಇದು ಕಡಿಮೆ. 
	
ದೇಹದೊಳಗೆ ಕಾಲ್ಸಿಯಂ ಉಪಯೋಗವಾಗಬೇಕಾದರೆ ಡಿ ಸತ್ವ ಬೇಕೇ ಬೇಕು. ಅತಿನೇರಿಳೆ ಕಿರಣಗಳ ಪ್ರಭಾವದಿಂದಾಗಿ ಚರ್ಮದಲ್ಲಿ ಡಿ2 (ಕಾಲ್ಸಿಫೆರಾಲ್) ಮತ್ತು ಡಿ3 (ಕೊಲೆಕಾಲ್ಸಿಪೆರಾಲ್) ತಯಾರಾಗುತ್ತವೆ. ಇವರೆಡು ಆ ಬಳಿಕ ಯಕೃತ್ತಿನಲ್ಲಿ ಮತ್ತು ಮೂತ್ರಪಿಂಡದಲ್ಲಿ ಬದಲಾವಣೆ ಹೊಂದಿ ಕ್ರಿಯಾಶೀಲ ಡಿ ಜೀವಸತ್ವವಾಗುತ್ತವೆ. ಇದರ ಚಟುವಟಿಕೆಯನ್ನು ಬದಿಗುರಾಣಿಕ ರಸದೂತ (ಪ್ಯಾರಾತಾರಮೋನ್) ಮತ್ತು ಕ್ಯಾಲ್ಸಿಟೋನಿನ ರಸದೂತಗಳು ನಿಯಂತ್ರಿಸುತ್ತವೆ. ಯಾವುದೇ ಕಾರಣದಿಂದ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದರೆ ಎಲುಬುಗಳೊಳಗಿನ ಕಾಲ್ಸಿಯಂ ಕರಗಿ ರಕ್ತ ಸೇರುತ್ತದೆ ಹೀಗಾಗಿ ಎಲುಬು ಮೆತ್ತಗಾಗುತ್ತವೆ. ಆಹಾರದಲ್ಲಿಯ ಕೊರತೆ, ಕರುಳಿನ ರೋಗ, ಮೂತ್ರಪಿಂಡಗಳ ನ್ಯೂನತೆ, ಎಳೆ ಬಿಸಿಲಿನಿಂದ ವಂಚನೆಗಳೆಲ್ಲ ಡಿ ಜೀವಸತ್ವದ ಕೊರತೆಯ ಕಾರಣಗಳು.
	
ಎಲುಮುರುಟು ರೋಗಕ್ಕೆ ತುತ್ತಾಗುವ ಮಗು ಮೊದಮೊದಲು ಸದಾ ಚಡಪಡಿಸುತ್ತದೆ. ಸಮಾಧಾನವೆಂಬುದು ಕಾಣುವುದಿಲ್ಲ. ರಾತ್ರಿ ಹೊತ್ತು ಮಲಗಿದ ಮಗುವಿನ ತಲೆ ಬೆವರಿ ನೆನೆಯುತ್ತದೆ. ಕೈ ಕಾಲು ಹೊಟ್ಟೆಗಳಲ್ಲಿ ಬಿಗುವಿರುವುದಿಲ್ಲ. ಕೂಡುವುದು, ತೆವಳಿಕೆ, ನಡಿಗೆಗಳು ನಿಧಾನ ಮತ್ತು ಕಷ್ಟ. ಹಲ್ಲು ಹುಟ್ಟುವುದೂ ತಡ. ಮೊದಲ ಕೆಲವು ತಿಂಗಳುಗಳಲ್ಲಿ ತಲೆ ಬುರುಡೆಯ ಮೂಳೆಗಳು ಮೆತ್ತಗಿರುತ್ತವೆ. ಉದ್ದ ನಿಲುವುಗಳ ಕೊನೆಗಳು, ಮೇಲೆಲುಮೂಳೆಯ ಮೆಲ್ಲೆಲುಬುಗಳು (ಎಪಿಫೈಯಲ್ ಕಾರ್ಟಿಲೇಜಸ್) ದಪ್ಪವಾಗಿ ಬೆಳೆದು ಅಗಲವಾಗಿ ಗೋಚರಿಸುತ್ತದೆ. ಅದೇ ರೀತಿ ಪಕ್ಕೆಲುಬು ಮೆಲ್ಲೆಲುಬಿನೊಂದಿಗೆ ಕೂಡುವೆಡೆಯಲ್ಲೂ ಮೂಳೆ ದಪ್ಪವಾಗಿರುವುದು ಸಾಮಾನ್ಯ. ಮೂಳೆಗಳ ಎಕ್ಸ್‍ಕಿರಣ ಪರೀಕ್ಷೆ, ರಕ್ತದಲ್ಲಿನ ಸುಣ್ಣಾಂಶ ರಂಜಕಗಳ ಮಟ್ಟದ ಪರೀಕ್ಷೆಯ ಫಲಿತಾಂಶಗಳಿಂದ ಎಲುಮುರುಟು ರೋಗ ಖಚಿತಪಡಿಸಿಕೊಳ್ಳಬಹುದು.
	
ಚಿಗುರಾವಸ್ಥೆಯಲ್ಲೇ ಇದನ್ನು ಗುರುತಿಸಿ ಉಪಚರಿಸದಿದ್ದರೆ ಮೈ ಮೂಳೆಗಳು ಬಗೆ ಬಗೆಯಾಗಿ ಅಂಕುಡೊಂಕಾಗುತ್ತವೆ. ವಿಕಲತೆ ತೋಳುಗಳಿಗಿಂತ ತೊಡೆ ಕಾಲುಗಳಲ್ಲಿ ಹೆಚ್ಚಿಗೆ ಕಾಣಿಸುತ್ತದೆ. ಶರೀರದ ಭಾರ ಕಾಲುಗಳು ಹೊರುವುದರಿಂದ ಹೀಗಾಗುವುದು. ತಾಗು ಮಂಡಿ(ನಾಕ್‍ನೀ) ಪಂಗಡಗಾಲು(ಬೋಲೆಗ್) ವಿಕಲತೆಗಳು ಮಗು ನಡೆಯುವುದಕ್ಕೆ ಮುನ್ನವೇ ಉಂಟಾಗುತ್ತವೆ. ನಡೆಯುವುದನ್ನು ಪ್ರಾರಂಭಿಸಿದ ಮೇಲೆ ಇದು ಇನ್ನೂ ಹೆಚ್ಚು ವಿಕಾರಗೊಳ್ಳುತ್ತವೆ. ಹೆಣ್ಣುಗೂಸಿನಲ್ಲಿ ಕಿಳ್ಗುಳಿ (ಪೆಲ್ಪಿಕ್) ಮೂಳೆ ಸೊಟ್ಟಾಗಿ ಮುಂದೆ ಹೆರಿಗೆಗೆ ತೊಂದರೆಯಾಗಬಹುದು. ಚಿಕಿತ್ಸೆ ಇಲ್ಲವಾದರೆ ರೋಗ ಕಳೆದು ಸೊಟ್ಟಗಿರುವ ಮೂಳೆಗಳು ಗಡುಸಾಗಿಬಿಡುತ್ತವೆ. ಎದೆಗೆಮ್ಮು, ಪುಪ್ಪುಸುರಿತ, ವಾಂತಿ, ಸ್ನಾಯುನಿತ್ರಾಣ, ಯಕೃತ್ತಿನ ತೊಂದರೆ, ರಕ್ತ ಕೊರೆ ಮುಂತಾದವುಗಳೆಲ್ಲ ಎಲುಮುರುಟದೊಂದಿಗೆ ಸಂಭವಿಸಬಹುದಾದ ತೊಡಕುಗಳು. ರಕ್ತಾಂಶದಲ್ಲಿ ಸುಣ್ಣಾಂಶದ ಕೊರತೆಯಾಗಿ ಕೈ ಅಂಗಾಲುಗಳಲ್ಲಿ ಎಡೆಸೆಳವು (ಟೆಟನಿ) ಇಲ್ಲವೆ ಮೂರ್ಛೆ ಕಾಣಿಸಿಕೊಳ್ಳುತ್ತವೆ. 
	
ಎಲುಮುರುಟು ರೋಗವನ್ನು ವಿಕಲತೆ ಮೂಡುವ ಮುನ್ನವೇ ಕಂಡು ಉಪಚರಿಸಬೇಕು. ಬರೀ ಕ್ಯಾಲ್ಸಿಯಂ ಫಾಸ್ಪರಸ್ ಕೊಟ್ಟರೆ ಸಾಲದು. ಮುಖ್ಯವಾಗಿ ಡಿ ಸತ್ವ ಕೊಡಬೇಕು. ಡಿ ಜೀವಸತ್ವ ಔಷಧ ರೂಪದಲ್ಲಿ ಲಭ್ಯವಿದೆ. ಮೀನಿನ ಎಣ್ಣೆ, ಹಾಲು, ತಪ್ಪಲುಪಲ್ಯಗಳನ್ನು ಮಗುವಿಗೆ ಆಹಾರ ರೂಪದಲ್ಲಿ ನೀಡಬೇಕು. ಎಲುಮುರುಟು ರೋಗದೊಂದಿಗೆ ನೀಚಗೊರೆ (ಸ್ಕರ್ವಿ) ಒಡಲಬೇನೆ (ಸೀಲಿಯಕ್ ಡಿಸೀಸ್) ಮೂತ್ರಪಿಂಡದ ಸೋಲುವೆಗಳನ್ನು ಗುರುತಿಸಿ ಉಪಚರಿಸಬೇಕು. ಕೆಲವು ಎಲುಮುರುಟು ರೋಗ ಎಂತಹ ಉಪಚಾರ ನೀಡಿದರೂ ವಾಸಿಯಾಗಲಾರದು.
	
ಬಲಿತ ವಿಕಲತೆಯ ಮಗುವಿನ ಉಪಚಾರ ಸರಳಸಾಧ್ಯವಾಗಲಾರದು. ಮೊದಲಿಗೆ ವಿಕಲತೆಗಳನ್ನು ಸರಿಪಡಿಸಬೇಕು. ಅಲ್ಪ ಪ್ರಮಾಣದ ವಿಕಲತೆಯನ್ನು ದಬ್ಬೆ (ಸ್ಪ್ಲಿಂಟ್) ಇಲ್ಲವೆ ಪ್ಲಾಷ್ಟರ್ ಆಪ್ ಪ್ಯಾರಿಸಿನ ಅಚ್ಚು (ಪಿ.ಓ.ಪಿ. ಕಾಸ್ಟ) ಹಾಕಿ ಸರಿಪಡಿಸಬಹುದು. ವಿಕಲತೆ ಬಲಿತಿದ್ದರೆ ಶಸ್ತ್ರ ಕ್ರಿಯೆಯಿಂದ ಸರಿಪಡಿಸಬೇಕು. ನಂತರ ಡಿ ಜೀವಸತ್ವ, ಕ್ಯಾಲ್ಸಿಯಂ, ಫಾಸ್ಪರಸ್‍ಗಳನ್ನು ಮತ್ತು ಪೌಷ್ಠಿಕಾಂಶದ ಆಹಾರವನ್ನು ಕೊಡಬೇಕು.

ಎಳುಕಳಲು : ಮಕ್ಕಳಲ್ಲಿ ಕಾಣುವ ಎಲುಮುರುಟು ಬೆಳೆದವರಲ್ಲಿ ಕಂಡುಬಂದರೆ ಅದಕ್ಕೆ ಎಳುಕಳಲು (ಆಸ್ಪಿಯೋ ಮಲೇಶಿಯಾ) ಎನ್ನುತ್ತಾರೆ. ಡಿ ಜೀವಸತ್ವದ ಕೊರತೆಯಿಂದಾಗಿ ಬೆಳೆದಿರುವ ಮೂಳೆಗಳು ಬರುಬರುತ್ತ ಮೆತ್ತಗಾಗುತ್ತವೆ. ಯಾವತ್ತ್ತೂ ಬಿಸಿಲಿನಿಂದ ವಂಚನೆಗೊಂಡು ಪರದೆಯ ಹಿಂದೆ ಬದುಕುವ ಹೆಂಗಸರಲ್ಲಿ ಎಳುಕಳಲು ಹೆಚ್ಚಿಗೆ ಕಾಣಿಸುತ್ತದೆ. ಗಂಡಸರಲ್ಲಿದು ಕಡಿಮೆ, ಬಸುರಿನಲ್ಲಿ, ಮಗುವಿಗೆ ಹಾಲುಣಿಸುವಾಗ ತಾಯಿಗೆ ಸಾಕಾಗುವಷ್ಟು ಕ್ಯಾಲ್ಸಿಯಂ ಸಿಗದಿದ್ದರೆ; ಸಿಕ್ಕ ಕ್ಯಾಲ್ಸಿಯಂ ಪಿಂಡಗೂಸು ಹೀರಿಕೊಳ್ಳುವದರಿಂದಲೂ ತಾಯಿಯ ಎಲುಬುಗಳು ಮೆತ್ತಗಾಗಿ ಎಲುಕಳಲು ಅಂಕುರಿಸಬಹುದು. ಆಗ ಸುಣ್ಣಾಂಶ ಕಡಿಮೆ ಹೊಂದಿದ ಮೈಯ ಮೂಳೆಗಳು ಮೆತ್ತಗಾಗಿ ಸುಲಭವಾಗಿ ಮುರಿದು ಹೋಗುವುದು. ಇವರು ನೋವಿನಿಂದ ಬಳಲುವಂತಾಗುತ್ತದೆ. ಇಂತಹ ಎಲುಕಳಲನ್ನು ಡಿ ಜೀವಸತ್ವವಾದ ಕ್ಯಾಲ್ಸಿಪೆರಾಲ್ ಕೊಟ್ಟು ಉಪಚರಿಸಬೇಕು. ಇದು ಮೂಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗರ್ಭಿಣಿ ಸ್ತ್ರೀಯರಿಗೆ ಶಿಕ್ಷಣ ಕೊಡಬೇಕು, ಸಮತೋಲನ ಆಹಾರ, ಮೀನಿನೆಣ್ಣೆ, ಹಾಲು, ತರಕಾರಿ ಸಾಕಷ್ಟು ಉಪಯೋಗಿಸಿದರೆ ಕೊರತೆಯ ಎಳುಕಳಲು ಆಗದಂತೆ ತಡೆಗಟ್ಟಬಹುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ